Friday, December 14, 2007

ಅಳಿಲು ಸೇವೆಗೆ ಸ್ವಾಗತ

ಇತ್ತೀಚೆಗೆ ಕನ್ನಡಿಗನು ಪಾಶ್ಚಾತ್ಯ ಸಂಸ್ಕೃತಿಗೆ ತುತ್ತಾಗಿ ತನ್ನ ತಾಯ್ನಾಡನ್ನೇ ಮರೆತುಹೋಗಿರುವ ಅನೇಕ ಉದಾಹರಣೆಗಳನ್ನು ನಮ್ಮ ದೈನಂದಿನ ಬದುಕಿನ್ನಲ್ಲಿ ಕಂಡಿರುತ್ತೇವೆ. ಹೀಗಿರುವಂಥಹ ಸಂದರ್ಭದಲ್ಲಿ ಕನ್ನಡದ ಬಗ್ಗೆ ಆಸಕ್ತಿ ತೋರಿ ಬೆಳೆಸುವ ಕಾರ್ಯ ಮಾಡುವವರು ಯಾರು? ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಇದಕ್ಕೆ ಸುಲಭ ಮತ್ತು ಏಕೈಕ ಉತ್ತರ ‘ಕನ್ನಡಿಗ’. ಆದಿಕವಿ ಪಂಪನಿಂದ ಹಿಡಿದು ಆದುನಿಕ ಕವಿಗಳಾದ ಕುವೆಂಪು, ಬೇಂದ್ರೆ, ಮಾಸ್ತಿ, ಅಡಿಗ, ಕೆ.ಎಸ್.ನ, ಮತ್ತಿತರ ಅನೇಕ ತಲೆಮಾರನ್ನು ಕಂಡ ಅಖಂಡ ಚರಿತ್ರೆ ಕನ್ನಡದ್ದು. ಈ ಮಹಾನುಭಾವರನ್ನು ಹೊರತು ಪಡಿಸಿದರೆ, ಇನ್ನಾರೂ ಕನ್ನಡವನ್ನು ಸಾಹಿತ್ಯಿಕವಾಗಿ ಬೆಳೆಸಲು ಸಾಧ್ಯವಿಲ್ಲ.

ಕಲೆ, ಸಂಸ್ಕೃತಿ, ಕ್ರೀಡೆ, ತಂತ್ರಜ್ಞಾನ, ಮತ್ತಿತರ ಕ್ಷೇತ್ರಗಳಲ್ಲಿ ಕನ್ನಡಿಗರ ಸಾಧನೆ ಅಪಾರವಾಗಿದ್ದರೂ, ಸಾಹಿತ್ಯ ಕ್ಷೇತ್ರದಲ್ಲಿ ಊಹೆಗೂ ಮೀರಿದ ಸಾಧನೆಯೇ ಆಗಿದೆ. ಇತ್ತೀಚಿನ ದಿನಗಳಲ್ಲಿ ಸಾಹಿತ್ಯದ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿರುವುದೆನ್ನುವುದೇ ವಿಪರ್ಯಾಸದ ಸಂಗತಿಯಾಗಿದೆ. ಈ ನಿಟ್ಟಿನಲ್ಲಿ ನನ್ನ ಕಡೆಯಿಂದ ಅಳಿಲುಸೇವೆಯನ್ನು ಮಾಡುವ ಉದ್ದೇಶದಿಂದ ಈ ಪ್ರಯೋಗ.

ನನ್ನ ಮೊದಲ ಕವನ

ಆಸೆಯ ಬಲೆ.

ಆಸೆ ಬಲೆಯು ಬೀಸಿದಾಗ
ಸಿಕ್ಕ ಮೀನೆ ಮಾನವ,
ಇದಕೆ ಸಿಕ್ಕಿ ಕಳೆದುಕೊಂಡ
ಇದ್ದ ಸ್ವಲ್ಪ ’ಮಾನ’ ವ.

ಆಸೆ ಬಲೆಯ ಹೆಣೆಯುವಲ್ಲಿ
ವಿಧಿಯ ಪಾತ್ರ ಹಿರಿದುದು,
’ನಾನೆ ಎಲ್ಲಾ’ ಎಂದ ಮೀನು
ಇದರ ಮುಂದೆ ಕಿರಿದುದು.

ಸಾಗರವು ಹಿರಿದಾಗಿದೆ
ಮೀನು ಬಹಳ ಇಲ್ಲಿವೆ,
ದೊಡ್ಡ ಮೀನು, ಸಣ್ಣ ಮೀನು
ಎಲ್ಲಾ ಬಲೆಗೆ ಸಿಲುಕಿವೆ.

ಆಸೆ ಇದ್ದ ಮೀನು ಇಲ್ಲಿ
ಶಾಂತ ಸಾವು ಪಡೆದಿದೆ,
ದುರಾಸೆಯಿದ್ದ ಮೀನು
ಕೊಳೆತು ನಾರುವಂತಿದೆ.